Friday, May 12, 2006

ನಾನು ಹೋದರೆ ಹೋದೇನು




ಮೊನ್ನೆ ನಾನು ಡಾ||ರಾಜ್ ರವರ "ಭಕ್ತ ಕನಕದಾಸ" ಚಿತ್ರ ನೋಡಿದೆ. ಸುಮಾರು ೮ ಅಥವಾ ೧೦ನೇ ಬಾರಿಯಿರಬಹುದು. ಅದರ ಒಂದೊಂದು ಹಾಡೂ ಅಪರಂಜಿ. ಮತ್ತೆ ಮತ್ತೆ ಕೇಳಬೇಕೆನ್ನಿಸುತ್ತಿತ್ತು. ಕನಕದಾಸರ ಪದಗಳಲ್ಲಿ ಅಡಗಿರುವ ಸಂದೇಶಗಳು ಎಂದೆಂದಿಗೂ ನಮಗೆ ನಮ್ಮ ಸಾಮಾಜಿಕ ಜವಾಬ್ದಾರಿಗಳನ್ನು ಜ್ನಾಪಿಸುತ್ತಿರುತ್ತವೆ.


ಆದರೆ ಇವುಗಳ ನಡುವೆ ನನಗೆ ಬಹಳ ಇಷ್ಟವಾದ ಒಂದು ಸನ್ನಿವೇಶವೆಂದರೆ ವ್ಯಾಸರಾಜರು ತಮ್ಮ ಶಿಷ್ಯಂದಿರನ್ನು ಕರೆದು ಕನಕನಿಗೆ ಹೀಗೆ ಕೇಳುತ್ತರೆ "ಕನಕ, ನನ್ನ ಶಿಷ್ಯಂದಿರಲ್ಲಿ ಯಾರಿಗೆ ಮೋಕ್ಷ ಪ್ರಾಪ್ತಿಯಾಗುತ್ತದೆ?". ಕನಕದಾಸರು ಒಬ್ಬೊಬ್ಬರನ್ನೂ ನೋಡಿ "ಇವರಿಗಾಗುವುದಿಲ್ಲ", "ಇವರಿಗಾಗುವುದಿಲ್ಲ" ಎಂದು ಹೇಳುತ್ತರೆ. ನಂತರ ಅಲ್ಲೆ ಕುಳಿತಿದ್ದ ಪುರಂದರದಾಸರನ್ನು ತೋರಿಸಿ ಕೇಳುತ್ತಾರೆ. ಅವರಿಗೂ ಆಗುವುದಿಲ್ಲವೆಂದು ಕನಕದಾಸರು ಹೇಳುತ್ತರೆ. ಕೊನೆಗೆ ತಾವು ಸ್ವರ್ಗ ಸೇರುತ್ತೇವೆಯೆ ಎಂದು ಕೇಳುತ್ತರೆ. ಅವರೂ ಇಲ್ಲವೆಂದು ಕನಕದಾಸರು ಹೇಳುತ್ತರೆ.

"ಇನ್ನು ನೀನು ಸ್ವರ್ಗಕ್ಕೆ ಹೋಗುವೆಯ?" ಎಂದು ಕೇಳುತ್ತಾರೆ. ಅದಕ್ಕೆ ಕನಕದಾಸರು "ನಾನು ಹೋದರೆ ಹೋದೇನು" ಎಂದು ಉತ್ತರಿಸುತ್ತಾರೆ. ಇದನ್ನು ಕೇಳಿ ಇತರ ಶಿಷ್ಯಂದಿರು ಕೋಪಗ್ರಸ್ತರಾಗುತ್ತಾರೆ. ಅದಕ್ಕೆ ಕನಕದಾಸರು ತಾವು ತಮ್ಮ ಬಗೆಗೆ ಹೇಳಿದುದರ ಅರ್ಥ ವಿವರಿಸುತ್ತಾರೆ. " 'ನಾನು ಹೋದರೆ ಹೋದೇನು' ಎಂದರೆ ನನ್ನಲ್ಲಿರುವ 'ನಾನು' ಎನ್ನುವ ಅಹಂಕಾರ ಹೋದರೆ ಆಗ ನಾನು ಸ್ವರ್ಗಕ್ಕೆ ಹೋಗುತ್ತೇನೆ" ಎಂದು.

ಈ ಮೂರು ಪದಗಳ ಎಂತಹ ಅರ್ಥ ಅಡಗಿದೆ! ಚಿನ್ನದಲ್ಲಿ ಕೆತ್ತಿಸಬಹುದಾದಂತಹ ನುಡಿಮುತ್ತುಗಳು! ನಾವು ಪ್ರತಿಯೊಬ್ಬರಲ್ಲೂ ಎಲ್ಲ ದುರಾಲೋಚನೆಗಳಿಗೆ ಕಾರಣವಾಗಿರುವುದೇ 'ನಾನು' ಎನ್ನುವ ಅಹಂಭಾವ. ಇದನ್ನು ನಾವೆಲ್ಲರೂ ಅರಿತುಕೊಂಡಲ್ಲಿ ನಮ್ಮ ಜೀವನ ಎಷ್ಟು ಅಭಿವ್ರುದ್ಧಿಗೊಳ್ಳುವುದು!


NOTE: If you cannot read Kannada fonts, please see here. Click on image below to read text in kannada.

No comments: